ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಅಕ್ಷರ ಯಕ್ಷಗಾನ : ಮಾತು ಜ್ಯೋತಿರ್ಲಿ೦ಗ

ಲೇಖಕರು :
ಕೊರ್ಗಿ ವೆ೦ಕಟೇಶ್ವರ ಉಪಾಧ್ಯಾಯ
ಗುರುವಾರ, ನವ೦ಬರ್ 20 , 2014

ಚತ್ವಾರಿ ವಾಕ್ ಪರಿಮಿತಾ ಪದಾನಿ
ಯೇನ ವಿದುರ್ಬ್ರಾಹ್ಮಣಾ ಯೇ ಮನೀಷಿಣಃ |
ಗುಹಾತ್ರೀಣಿ ನಿಹಿತಾ ನೇ೦ಗಯ೦ತಿ
ತುರೀಯ೦ ವಾಚೋ ಮನುಷ್ಯಾ ವದ೦ತಿ ||
(ಋಗ್ವೇದ 1. 164.45)

ವೈದಿಕ ಋಷಿ ಉಚಥ್ಯಪುತ್ರ ಧೀರ್ಘತಮನ ದರ್ಶನದ೦ತೆ ಮಾತಿಗೆ ನಾಲ್ಕು ಸೋಪಾನಗಳಿವೆ. ಮೊದಲ ಮೂರು ಮೆಟ್ಟಿಲುಗಳು ಮೂಗು ಮುಚ್ಚಿ ಮುಳುಗಿದರೂ ಕಾಣದಷ್ಟು ಆಳದಲ್ಲಿವೆ. ನಾಲ್ಕನೆಯದೇ ವೈಖರಿ. ಇದರಿ೦ದಲೇ ಮಾನವ ಮೃಗವಾಗದೆ ವ್ಯಕ್ತಿಯಾಗಿದ್ದಾನೆ. ಬೆಲೆ ಬರುವುದು, ಕಟ್ಟುವುದು ಅಭಿವ್ಯಕ್ತಿಗೆ ಮಾತ್ರ. ಅವ್ಯಕ್ತವಾದುದು ಎ೦ದೆ೦ದೂ ಅಮೂಲ್ಯವೇ ಸರಿ.

ಹಣೆ ನೋಡಿ ಮಣೆ ಇಡುವವ ಮನುಷ್ಯನೇ ಅಲ್ಲ. ಮಾತಿನಿ೦ದ ಮನ್ನಣೆ. ಎಲ್ಲಾ ನಾಳೆಗಳು ನಿ೦ತಿರುವುದೂ ನಾಲಗೆಯ ಮೇಲೆ. ಶ್ರೀರಾಮ ಹನುಮ೦ತನನ್ನು ಕೊ೦ಡಾಡಿದ. ಆಕಾರವನ್ನು ಕ೦ಡಲ್ಲ. ಆಡಿಕೆಯನ್ನು ಕೇಳಿ. ಮಾನವನ ಅ೦ಗೋಪಾ೦ಗಗಳಲ್ಲಿ ಮುಖವು ಮುಖ್ಯವಾದುದು ಮಾತಿನ ನೆಲೆಯಿ೦ದ. ಪ್ರಾಣ ಪ೦ಚಕದಲ್ಲಿ ಪ್ರಧಾನವಾದ ಪ್ರಾಣಶಕ್ತಿಯ ಆವಾಸ ಸ್ಥಾನವೂ ಇದೆ. ಆಳ್ತನದ ಪ್ರತಿಷ್ಠೆ, ಪೊಳ್ಳುತನಗಳೆಲ್ಲಾ ಹೊರಬೀಳುವುದು ಇಲ್ಲಿ೦ದಲೇ. ಸರಸ್ವತಿಯ ಸಮಾರಾಧನೆ ಎಲ್ಲರಿ೦ದಲೂ ಸಾಧ್ಯವಲ್ಲ. ವಾಲ್ಮೀಕಿಯಿ೦ದ ರನ್ನನವರೆಗೆ ಎಲ್ಲರೂ ವಾಗ್ದೇವಿಯ ಭ೦ಡಾರದ ಬೀಗಮುದ್ರೆ ಒಡೆದವರೆ. ಯಾರಿಗೆ ಎಷ್ಟು ದಕ್ಕಿದೆ. ಸಿಕ್ಕಿದೆ ಎ೦ಬ ಗಣಿತ. ಮು೦ದಿನ ಪೀಳಿಗೆಗೆ ಬಿಟ್ಟದ್ದು. ಶಬ್ದಾರ್ಥಗಳ ಸಮಪಾಕದಿ೦ದ ಕಾವ್ಯದ ಹುಟ್ಟು. ಅರ್ಥಗಾ೦ಭೀರ್ಯ ಹೆಚ್ಚಿದ೦ತೆ ಮಾತಿಗೆ ಶಾಸ್ತ್ರದ ಮರ್ಯಾದೆ. ಅರ್ಥವೆ೦ಬ ಪುಣ್ಯಾ೦ಗನೆ ಹಳೆ ಅತ್ತೆಯಾಗಿ ಸ೦ದಿಸೇರಿ, ಶಬ್ದಗಣಿಕೆಯರು ಬಣ್ಣ ಬಣ್ಣದ ಸೀರೆಸುತ್ತಿ ನೆರಿಹೊಯ್ದು ಡೊ೦ಬರಾಟಕ್ಕೆ ತೊಡಗಿದಾಗ ಅದು ಬರಿಬುರುಡೆ, ಹರಟೆ, ಕೊರೆವ ಕರಕರೆ. ಆಗ ಭಾಷೆಯ ಬಾಳು ಬೀದಿಪಾಲು.

ಶೇಣಿ ಗೋಪಾಲಕೃಷ್ಣ ಭಟ್
ಈ ಹಿನ್ನೆಲೆಯಲ್ಲಿ ಯಕ್ಷಲೋಕದ ಜೋಡಿ ದಿಗ್ಗಜಗಳೆನಿಸಿದ ಮಲ್ಪೆ ಶ೦ಕರನಾರಾಯಣ ಸಾಮಗರನ್ನು ಹಾಗೂ ಶೇಣಿ ಗೋಪಾಲಕೃಷ್ಣ ಭಟ್ಟರನ್ನು ನನ್ನ ಎಳಸು ಕಣ್ಣುಗಳು ಕ೦ಡ೦ತೆ ಕ೦ಡರಿಸುವ ಪ್ರಯತ್ನವನ್ನು ನನ್ನದೇ ಮಿತಿಯಲ್ಲಿ ಮಾಡುತ್ತಿದ್ದೇನೆ. ಯಕ್ಷ ಶಾರದೆಯ ಅವಳಿ ಮಕ್ಕಳಾದ ಈ ಉಭಯ ವಾಗ್ವಿಶಾರದರಲ್ಲೂ ಅ೦ತತಃ ನನಗಿರುವ ಗೌರವಾದರಗಳೇ ಅಲ್ಲಲ್ಲಿ ಪೂರ್ವಗ್ರಹವೋ ಪೂರ್ವಾಗ್ರಹವೋ ಆಗಿ ಇಣಕಿ ಹಣಕುವುದಕ್ಕೆ ಒ೦ದಿಷ್ಟು ಒತ್ತಾಸೆ ನೀಡಿಯಾವು. ಶೇಣಿಯವರು ಸಾಮಗರನ್ನು ಗುರುಗಳೇ ಎ೦ದು ಸ೦ಬೋಧಿಸುವುದನ್ನು ಕೇಳಿದ್ದೇನೆ. ನನ್ನ ಪಾಲಿಗೆ ಅವರೀರ್ವರೂ ಪರೋಕ್ಷವಾಗಿ ಗುರುಗಳು.

ಸಾಮಗರನ್ನು ನಾನು ಮೊತ್ತಮೊದಲು ಕ೦ಡುದು ಪರ್ಕಳದಲ್ಲಿ ಭೀಷ್ಮನ ಭೂಮಿಕೆಯಲ್ಲಿ. ಅ೦ದಿನ ಅವರ ಅರ್ಥದಲ್ಲಿ ಅತಿವ್ಯಾಪ್ತಿ, ಅವ್ಯಾಪ್ತಿ, ಪ್ರಾಗಭಾವ, ಪ್ರಧ್ವ೦ಸಾಭಾವ, ಮು೦ತಾದ ನ್ಯಾಯಶಾಸ್ತ್ರೀಯ ಹಾಗೂ ತದಿತರ ಶಾಸ್ತ್ರೀಯ ವಿಚಾರಗಳು ವಿಫ಼ುಲವಾಗಿ ಬ೦ದಿದ್ದವು. ಆಗ ನಾನು ನ್ಯಾಯಶಾಸ್ತ್ರದ ವಿದ್ಯಾರ್ಥಿಯಾಗಿದ್ದೆ. ಶಾಸ್ತ್ರವನ್ನು ಹೇಗೆ ವಿನಿಯೋಗಿಸಬೇಕೆ೦ಬುದಕ್ಕೆ ಅವರು ನನಗೆ ನೇರಪ್ರೇರಣೆ.

ಮೊತ್ತಮೊದಲು ನನ್ನ ಮನೋಬುದ್ಧಿಗಳಲ್ಲಿ ಶ್ರೇಣಿಯವರನ್ನು ತು೦ಬಿಕೊ೦ಡುದು ರಾವಣನ ಪಾತ್ರದಲ್ಲಿ ಮಣಿಪಾಲದಲ್ಲಿ. ಪುತ್ರಕಾಮೇಷ್ಟಿಯಿ೦ದ ಸೇತುಬ೦ಧದ ತನಕ ಪ್ರತಿಘಟನೆಯನ್ನೂ ದಶಮುಖನಾಗಿ ತಮ್ಮ ಸೀಳುಬುದ್ಧಿಯಿ೦ದ ವಿವಿಧ ಕೋನದಿ೦ದ ಅಳೆಯುತ್ತಾ ಎಲ್ಲರಲ್ಲೂ ವೆಚ್ಚಕ್ಕೆ ತಕ್ಕ ಭ್ರಷ್ಟಾಚಾರವಿದ್ದೇ ಇದೆ. ಹೊನ್ನ ಜಿ೦ಕೆಯ ಹಿ೦ದೋಡಿದ ಹ೦ಬಲದ ಕಣ್ಣು ಮಣ್ಣಿನ ಮಗಳದ್ದಾದರೆ ಕೈ ಹಿಡಿದವಳ ಕಾಮನಾಪೂರ್ತಿಗಾಗಿ ಕಾ೦ಚನ ಮೃಗದ ಬೆನ್ನಿಗೆ ಬಿದ್ದವ ಅಯೋಧ್ಯೆಯ ರಾಜಪುತ್ರ ರಾಮ. ಆತನ ಅರ್ಧಾ೦ಗಿಯನ್ನು ಹಿಡಿದು ತ೦ದವ ರಾವಣ. ಯಾರೂ ಜಿತಕಾಮರಲ್ಲ ಎಲ್ಲರೂ ಶ್ರಿತಕಾಮರೇ ಹೀಗೆ ಸಾಗುವ ಗ೦ಡುನುಡಿಯ ಮ೦ಡನೆಗೆ ಮ೦ಡೆ ಆಡಿಸದವರಾರು? ನಾನ೦ತೂ ಅ೦ದು ರಾವಣನ ಪಕ್ಷದಿ೦ದ ಹೋರಾಡುವುದಕ್ಕೆ ಸಿದ್ಧನಾಗಿದ್ದೆ. ಅರ್ಥಗಾರಿಕೆಯಲ್ಲಿ ಶಾಸ್ತ್ರಪ್ರಯೋಗ ಎಲ್ಲಿ? ಹೇಗೆ? ಎಷ್ಟು? ಎ೦ಬುದಕ್ಕೆ ಶೇಣಿ ಮಾರ್ಗಮಣಿ, ಮು೦ದಿನವರೆಗೆ ಗಣಿ ನನ್ನ೦ಥವರೆಲ್ಲಾ ಅವರಿಗೆ ಋಣಿ.

ಸಾಮಗ ಶೇಣಿಗಳೆ೦ದರೆ ಹಳೇಬೇರು ಹೊಸಚಿಗುರು. ಯಕ್ಷಗಾನದ ತಾಳಮದ್ದಳೆ ಎ೦ಬ ಶ್ರೀಮ೦ತ (?) ಪ್ರಕಾರದ ಪೂರ್ವೋತ್ತರ ರೂಪಗಳು. ಪೂರ್ವದಿ೦ದ ಉತ್ತರಕ್ಕೆ ಪೂರ್ತಿ ಒ೦ದು ಸುತ್ತು ಪ್ರದಕ್ಷಿಣೆ. ಪ್ರಾಯಃ ಇನ್ನೂ ಹೊಸಬಗೆಯ ಜಾಣ ಪ್ರಯೋಗಕ್ಕೆ ಅರ್ಥ ಪ್ರಪ೦ಚದಲ್ಲಿ ಜಾಗ ಇಲ್ಲ. "ಮಾತಾಪೂರ್ವ ರೂಪ೦""ಪಿತೋತ್ತರ ರೂಪ೦" ಎನ್ನುತ್ತದೆ ತೈತ್ತಿರೀಯ ಶ್ರುತಿ. ಸಾಮಗರು ತಾಯಿ, ಮಿತ್ರ ಸಮ್ಮಿತ ಬೋಧನೆ. ಶೇಣಿ ತ೦ದೆ, ಪ್ರಭುಸಮ್ಮಿತ, ಶೋಧನೆ.

ಅದೇ ಪ್ರಸ೦ಗ, ಅದೇ ಪಾತ್ರ, ಅದೇ ಊರು, ಅದೇ ಶ್ರೋತೃವೃ೦ದ ಹತ್ತುದಿನಗಳಾದರೂ ಸರಿ ಪ್ರತಿದಿನವೂ ಹೊಸ ಹೊಸ ಅಸ್ತ್ರಗಳನ್ನೆಸೆದು ಮಾರಾ೦ತು ಹೋರಾಡಿ ವಾದ ವಾಕ್ಯಾರ್ಥಗಳಲ್ಲಿ ಎತ್ತಿದ ಕೈಯಾಗಿ, ಸೈ ಸೈ ಎನಿಸಿಕೊ೦ಡ ಸಾಮಗರ ಮಾತಿಗೆ ಮೈ ಎಷ್ಟೋ? ಅ೦ಗಿಯ ಮೇಲೆ ಅ೦ಗಿ ಅವರಿಗಷ್ಟೇ ಅಲ್ಲ ಅವರ ಮಾತಿಗೂ.

ಚೆನ್ನಾಗಿ ಸಾಮು ಮಾಡಿದ ಜಟ್ಟಿ ಕಣಕ್ಕಿಳಿದರೆ ಹೇಗೆ? ಪುಟಿವ ಮಾ೦ಸಖ೦ಡ, ಎದುರಾಳಿಗೆ ಅಗ್ನಿಪಿ೦ಡ. ಎ೦ಥ ಗ೦ಡು ಗು೦ಡಿಗೆಯೂ ಬಿರಿಯಬೇಕು. ಬಿಡಿಬಿಡಿ ಪಟ್ಟುಗಳು. ಇಡಿಯ ಪೆಟ್ಟು ತಿಳಿವ ಮುನ್ನವೇ ಮು೦ದಿನವನ ಮುಖ ಮಣ್ಣಿನಲ್ಲಿ. ಶೇಣಿಗಳ ತಣ್ಣಗಿನ ತರ್ಕ ತರ೦ಗದ ಹೊಡೆತ ಉ೦ಡವರಿಗೆ ಗೊತ್ತು. ಮು೦ದೆ ಕುಳಿತ ವಕ್ತಾರನ ಪಾಲಿಗೆ ಇವರು ಅಲೆ, ತೆರೆ, ಲಹರಿ, ಉಲ್ಲೋಲ, ಕಲ್ಲೋಲ. ಇವೆಲ್ಲಾ ಪರ್ಯಾಯ ಪದಗಳಾದರೂ ಇನ್ನು ಬೇರೆ ಬೇರೆ ಅರ್ಥಗಳನ್ನು ತೆರೆದುಕೊಳ್ಳಬಲ್ಲವು, ಶೇಣಿಯವರೂ ಹಾಗೆ.

ಭಾವಭಾಗೀರಥಿಯ ಉಕ್ಕ೦ದವನ್ನು ಕಾಣಲಾಗದಿದ್ದರೂ ಅದಕ್ಕೆ ಬೇರೆಯೇ ಒ೦ದು ಆಯಾಮವನ್ನು ತ೦ದುಕೊಡುವಲ್ಲಿ ಈರ್ವರೂ ಸ್ವತ೦ತ್ರರಾಗಿ ಶ್ರಮಿಸಿದ್ದಾರೆ. ಮಾತ್ರವಲ್ಲ ಈಗಲೇ ಆ ಮಟ್ಟಿಗೆ ಉದ೦ತ ಕಥೆಯಾಗಿದ್ದಾರೆ. ಸಾಮಗರದ್ದು ಪ್ರತ್ಯಕ್ಷರ ವಿವರಣ, ಶೇಣಿಯವರದ್ದು ಸಾರಗ್ರಹಣ. ಸಾರ್ವಕಾಲಿಕ ಸ೦ಗತಿ ಸಾಮಗರಿಗೆ ಇಷ್ಟ. ಸಮಕಾಲೀನ ಸ೦ಘರ್ಷ ಶೇಣಿಗೆ ಪ್ರಿಯ. ಪದ್ಯವನ್ನು ಅರ್ಥೈಸುವಲ್ಲಿ ಉಭಯತ್ರ ಒ೦ದಿಷ್ಟು ವ್ಯತ್ಯಾಸವಿದೆಯಾದರೂ ಈ ಮೊದಲೇ ಹೇಳಿದ೦ತೆ ಪೂರ್ವೋತ್ತರ ರೂಪ, ಪೂರಕ.

ಒ೦ದು ಹೊಸೆದ ಹಗ್ಗ. ಇನ್ನೊ೦ದು ಮಸೆದ ಕತ್ತಿ. ಒ೦ದು ಕಟ್ಟಿ ಕೆಡವಿದರೆ ಇನ್ನೊ೦ದು ಕತ್ತರಿಸಿ ಚೆಲ್ಲುತ್ತದೆ. ಇಬ್ಬರೂ ಸೇರಿದ ತಾಳಮದ್ದಳೆಯಲ್ಲಿ ಉಳಿದವರಿಗೆ ಹೇಳುವುದಕ್ಕೆ ಏನೂ ಉಳಿದಿರುವುದಿಲ್ಲ. ಪ್ರಸ೦ಗದ ಎಲ್ಲ ಪಾತ್ರಗಳ ಒಳ - ಹೊರ ಮೈಗಳು ಇವರ ಮಾತಿನ ಮೈದಾನದಲ್ಲಿ ಬಟ್ಟ೦ಬಯಲು. ಯುಗ ಮಗುಚಿದರೂ ಸರಿಯೇ ವಾಗ್ವ್ಯಾಪಾರದಲ್ಲಿ ಇನಿತು ಅಶ್ರದ್ಧೆ ಇಣುಕದು. ಉಭಯತ್ರ ಕಾಣುವುದು ವಚೋವಿಲಾಸವಲ್ಲ ವಚೋವಿಶೇಷ.

ಮಲ್ಪೆ ಶ೦ಕರನಾರಾಯಣ ಸಾಮಗ
ಖಾದಿಯ ನ೦ಟಿ೦ದ ಬ್ರಹ್ಮಗ೦ಟು ಹಿಡಿದೇ ನೇಗಿಲ ಹಾದಿ ಕೊರೆದ ಆ ಗಾ೦ಧಿವಾದಿಯ ವಾ೦ಶಿಕ ಹಕ್ಕು ಸಾಮಗಾನ. ಹಿಡಿದದ್ದು ಯಕ್ಷಗಾನ. ಸೌಕೂರು ಮೇಳದಲ್ಲಿ ರ೦ಗು ಹಚ್ಚಿ ರ೦ಗಕ್ಕೇರಿ ರ೦ಗನಾಗಿ ರುಕ್ಮಿಣಿ ಕಳುಹಿಸಿದ ಪ್ರಣಯದೋಲೆಗೆ ತಾಸುಗಟ್ಟಲೆ ಪ೦ಡಿತ ಪ್ರಕಾ೦ಡರೂ ಬೆರಗಾಗುವ೦ತೆ ಅರ್ಥಹೇಳಿ ಬೆದ್ರಾಡಿ ಶಾಸ್ತ್ರಿಗಳಿ೦ದ "ನಿನ್ನ೦ಥವನಿಗೆ ಆಟ ಹೇಳಿಸಿದ್ದಲ್ಲ" ಎ೦ಬ ಬುದ್ಧಿ ಮಾತು ಹೇಳಿಸಿಕೊ೦ಡರೂ "ಅವರವರ ಪ್ರಾರಬ್ಧ" ಎ೦ಬ ಉತ್ತರವನ್ನಿತ್ತು ಕೊನೆಯವರೆಗೂ ಅದರಲ್ಲೇ ಉಳಿದ ಕರ್ಮಠ, ಕೀರ್ತನಕಾರ, ಕಲಾವಿದ.

ವೇದದಿ೦ದ ಮ೦ಕುತಿಮ್ಮನ ಕಗ್ಗದ ತನಕ ಎಲ್ಲವನ್ನೂ ಸೂರೆಗೊ೦ಬ ಮಾಲೆಮಾತು. ಕೃಷ್ಣನಿ೦ದ ಕೈಲಾಸ ಶಾಸ್ತ್ರಿಯವರೆಗೆ ಯಾವುದಾದರೂ ಸರಿ ಅವರದೇ ಒಪ್ಪ ಓರಣ. ಸಾಮಗರನ್ನು ಕೆಣಕುವುದೆ೦ದರೆ ತರಗೆಲೆ ತು೦ಬಿದ ಕತ್ತದ ಕಲ್ಲಿಗೆ (ಕುರ್ಕಿಲ್) ಕೈ ಇಕ್ಕಿದ೦ತೆ. ಅರ್ಜುನನ ಅಕ್ಷಯಾಸ್ತ್ರ ಅಸ೦ಖ್ಯಾತ ಅನುಸ್ಯೂತ. ವೇದ, ವೇದಾ೦ತ, ಸಾ೦ಖ್ಯ, ಯೋಗ, ಆಯುರ್ವೇದಗಳನ್ನು ಉದ್ಧರಿಸಿದಷ್ಟೇ ಸುಲಭವಾಗಿ ಸ೦ತೆಯ ಸಾಬಿಯನ್ನೂ ಉದಾಹರಿಸಬಲ್ಲರು. "ಕೌರವ! ನಿನಗೆ ಪಾಯ್ಸವೂ ಒ೦ದೆ ಪಾಯಿಖಾನೆಯೂ ಒ೦ದೆ" ಇದು ಅವರದೇ ಮಾತು,

ಸಾಮಗರದ್ದು ವಿಶ್ವಭಾರತಿ, ಹತ್ತಡಿ ಹರಡುವ ಹಿಡಿ ಬೆಳಕಿನ ಹಣತೆಯಲ್ಲ ಬಾನನಡುವಿನ ಮೃಹದ್ಭಾನು. ಭವನದ ಬೆಳಕಲ್ಲ ಭುವನದ ಬೆಳಕು. ದೇಶಕಾಲಾದ್ಯನವಚ್ಛಿನ್ನವಾದ ಶಬ್ದಬ್ರಹ್ಮ. ಗಡಿಯ ಗಲಭೆ ಇಲ್ಲ. ಮೈಸೂರು, ಮಹಾರಾಷ್ಟ್ರ, ಮದ್ರಾಸ್, ಆ೦ಧ್ರ ಎಲ್ಲವೂ ಒ೦ದೆ. "ಬಚ್ಚಾ ಬೂಢಾ" ಮು೦ತಾದ ಅನ್ಯಭಾಷಾ ಪದಗಳು ಅವರ ಶೈಲಿಗೆ ಸಹಜ. "ಸಾಮುದ್ರೋಹಿ ತರ೦ಗಃ ನಸಮುದ್ರಸ್ತಾರ೦ಗಃ" ನೀರಧಿಯನ್ನು ಸೇರಿದ ಹೊಳೆಯ ನೀರಿಗೂ ಸಾಗರದ ಲಾವಣ್ಯ. "ಸರ್ವ೦ ಖಲ್ವಿದ೦ ವಚಃ" ಅರ್ಥವತ್ತಾದ ಆಲ೦ಕಾರಿಕ ಶಬ್ದಗಳೆಲ್ಲಾ ಅವರ ಜೋಳಿಗೆಯಲ್ಲಿ. "ಯದಿಹಾಸ್ತಿ ತದನ್ಯತ್ರ" ಉಳಿದೆಡೆ ಹೊಸದೆನಿಸುವುದೆಲ್ಲಾ ಇವರ ಉಗ್ರಾಣದಲ್ಲಿ ಹಳೆ ಮಾಲು.

ಆಡುನುಡಿಯಲ್ಲಿ ಹೇಳುವುದಿದ್ದರೆ ಸಾಮಗರು ಸಾ೦ಬಾರ್ ಬಟ್ಲ್ (ಸಾಮಗರು ಸ೦ಬಾರ ಬಟ್ಟಲು) ಪರಿಸರವನ್ನು ಒ೦ದಿ೦ಚು ಬಿಡದೇ ಬಣ್ಣಿಸುವ ನಿರವಸರ ನಿರೂಪಣೆ ಇಳುಕಲಲ್ಲಿ ಸಾಗುವ ಚಕ್ಕಡಿ. ಇದಿರುಗಾಳಿಗೂ ಗಡಗಡನೆ ನಡೆದುಬಿಡುವ ನಾಲಗೆಯ ಗಾಲಿಗೆ ತಡೆಯಿಲ್ಲ. ಒಡಲ ಹೇರು ಹೇರಳ. ಶ್ರಾವಕನಿಗೆ ಸವಾಲೆಸೆವ ಬಾಣಶೈಲಿ. "ಬಾನಚ೦ದಿರ ಭೂಮಿಯಲ್ಲಿ ಬಿಡಾರಹೂಡಿದ೦ತೆ", "ದೈವದ ದುರ್ವಿಪಾಕದಿ೦ದ ದಾರಿದ್ರ್ಯ ದಾವಾನಲ ದಗ್ದನಾಗಿ ದೈನ್ಯದ ದುಷ್ಕೂಪದಲ್ಲಿ ಬಿದ್ದು ಧರ್ಮಭ್ರಷ್ಟನಾಗಿ" ಈ ಮಾದರಿಯ ಆದ್ಯಕ್ಷರ ಪ್ರಾಸದ ಪದಪ೦ಕ್ತಿಗಳನ್ನು ಗ್ರಹಿಸುವುದಕ್ಕೆ ಕೇಳುಗನ ಕಿವಿ ಚುರುಕಿರಬೇಕು. ಇಲ್ಲವಾದರೆ "ಅಬ್ದಶಬ್ದಗಳ ಪ್ರಾರಬ್ಧದಲ್ಲಿ ಸಹ ಮಹಾಬ್ಧಿಯ ಕಣವೊ೦ದು ಸೆರೆಸಿಕ್ಕದಯ್ಯ" ಎ೦ಬ ವಿ. ಕೃ. ಗೋಕಾಕರ ಮಾತು ನಮ್ಮ ಅನುಭವವಾದೀತು.

ತನ್ನ ಮು೦ದೆ ಕುಳಿತವ ಮಗುವಾಗಲೀ, ಮುಗ್ಧನಾಗಲೀ, ಅಪ್ರಸಿದ್ಧನಾಗಲೀ, ಅಜ್ನನಾಗಲಿ ಆತನನ್ನು ತಿದ್ದಿಕೊ೦ಡು, ತಬ್ಬಿಕೊ೦ಡು ಸ೦ವಾದಕ್ಕೆಳೆವ ಸಾಮಗರ ಸೌಮನಸ್ಯ ಸರ್ವಥಾ ಸ್ಮರಣೀಯ. ಕುಕ್ಕುಟಕದನಕ್ಕೆಳೆಸುವ ಕಲಾವಿದ ಪೀಳಿಗೆಗ೦ತೂ ಇದು ವರಣೀಯ ಅನುಸರಣೀಯ. "ಮೂಕ೦ ಕರೋತಿ ವಾಚಾಲ೦" ಎ೦ಬುದು ಸಾಮಗರ ಸೌಜನ್ಯಕ್ಕೆ ಸಲ್ಲಿಸುವ ಗೌರವ ಸೂಕ್ತಿ. ಸುದೀರ್ಘ ಪೂರ್ವಪಕ್ಷವನ್ನು ಸಹನೆಯಿ೦ದಾಲಿಸಿ ಒ೦ದಿಷ್ಟು ಬಿಡದೇ ನೆನಪಿಟ್ಟು ಅನುಕ್ರಮವಾಗಿ ಉತ್ತರಿಸುವ ಈ ಶತಾವಧಾನಿ ಸದಾ ಸಮಾಧಾನಿ. ಕ೦ಠದಲ್ಲಿ ಕು೦ದಿ ಹೋದ ದನಿಗೆ ಶಬ್ದವೇ ಧುನಿ. ಜಾನಪದದ ಬನ್ನಿಯನ್ನೂ, ಕಾವ್ಯಧ್ವನಿಯನ್ನೂ ತನಿಯಾಗಿ ಹನಿಯಾಗಿ ವರಿಸಿ ಬೆರೆಸಿ ಬೆಸೆದ ಭಾಷೆ ಹೊಸೆದ ಮಾತು, ಮೂರು ಕಾಲ ಬಾಳುವ ಮು೦ದಿನ ಅರ್ಥವಾದಿ ಪೀಳಿಗೆಗೇ ಜೀವಧಾತು.

ಶೇಣಿ ಗೋಪಾಲಕೃಷ್ಣ ಭಟ್
ಶೇಣಿಯವರ ಮಾತಿನ ಭಾರ ಭಾರವಿಗೆ ಬಹಳ ಹತ್ತಿರ. "ವಾಚಾಲ೦ ಮೂಕ೦ ಕರೋತಿ" ಬೆಚ್ಚಿಸಿ ಬೆಮರಿಸಿ ಬಾಯಿಕಟ್ಟಿಸುವ ಇವರ ಭಾರತಿ ಹೃಷ್ಟ - ವಿಶಿಷ್ಟ, ವಸ್ತುನಿಷ್ಠ, ತರ್ಕಪುಷ್ಟ, ಕಣ್ಣಿಗೆಣ್ಣೆ ಇಟ್ಟರೂ ಹುಳುಕು ಹುಡುಕುವುದು ಕಷ್ಟ. ಉಪಕ್ರಮದಿ೦ದ ಉಪಸ೦ಹಾರದವರೆಗೆ ಎಲ್ಲವೂ ಅಚ್ಚುಕಟ್ಟು. ಸಮಪಾಕ ಸಮತೂಕ. ಸಭೆ ತೂಕಡಿಸದ೦ತೆ ನಡುನಡುವೆ ಎಚ್ಚರಿಸುವ ಉತ್ತರದ ಝೇ೦ಕಾರ ಠೇ೦ಕಾರ, ಓ೦ಕಾರದಿ೦ದ ಬಡಹೆತ್ತಬ್ಬೆಯ ಮಗನವರೆಗೆ ಎಲ್ಲವೂ ಪ್ರಸ್ತುತ.

ಉಪನಿಷತ್ತಿನಿ೦ದ ಉಗಾಭೋಗದವರೆಗೆ ಮೂಲಾಧಾರದಿ೦ದ ಸಹಸ್ರಾರದ ತನಕ ಸಾಹಿತ್ಯ ಸ೦ಚಾರಿ. ಆಟ, ಕೂಟ, ಕಥಾಕಾಲಕ್ಷೇಪ, ಭಾಷಣ, ಉಪನ್ಯಾಸ, ಸರ್ವತ್ರ ಸಮಪ್ರವೇಶ. ಕ೦ದಾಚಾರದ ಕತ್ತಲಲ್ಲಿ ಹೂತು ಕಳೆಗೆಟ್ಟ ಕಥೆಗಳ ಮೇಲೆ ಬುದ್ಧಿಯ ಬೆಳಕು ಹರಿಸಿ ಸಪ್ರಭಗೊಳಿಸಿ ಸಪ್ರಾಣಿಸಿ ಸಹೃದಯ ಹೃದಯಾಸ್ವಾದನಕ್ಕೆ ಸಜ್ಜುಗೊಳಿಸುವ ರಸಜ್ನತೆ, ವರ್ತಮಾನದ ಹಸಿರು ಕನ್ನಡಕದಿ೦ದ ಭೂತಪೂರ್ವವನ್ನು ಕಾಣುವ ಕುತೂಹಲ. ಪುರಾಣದ ಬೆಲೂನಿಗೆ ವಿವೇಕದ ಸೂಜಿ ಚುಚ್ಚಿ ಅನಾವಶ್ಯಕವಾದುದನ್ನು ವಾತಾವರಣಕ್ಕೆ ಬಿಟ್ಟು ಬಿಡುವ ಶಸ್ತ್ರಕ್ರಿಯೆಗೆ ಶಾಸ್ತ್ರವನ್ನೇ ಉಪಕರಣವಾಗಿ ಬಳಸುವ ಸದ್ಯೋಜಾತ ಪ್ರತಿಭೆ. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುವ ಸ್ವಭಾವ ಸಿದ್ಧಿ, ಪಾತ್ರಕ್ಕೆ ಪ್ರತಿಷ್ಠೆ ಪಾವನತೆಗಳ ಪ್ರಾಪ್ತಿ ಪೋಣಿಸುವ ಪದಪ೦ಕ್ತಿಗಳಿ೦ದಲ್ಲ; ಅರ್ಥಶುದ್ಧಿಯಿ೦ದ ಎ೦ಬ ನಿಲುಮೆ, ಯಕ್ಷಗಾನದ ಗು೦ಗನ್ನು ಕಳಚಿಕೊಳ್ಳದೇ ಶ್ರುತಿಬದ್ಧವಾಗಿ ನಾಟಕೀಯತೆಯೊ೦ದಿಗೆ ಪಾತ್ರವನ್ನು ನಿರ್ವಹಿಸುವ ಅಪಾರ ಅಪ್ರಮತ್ತ ಶ್ರದ್ಧೆ. ಪ್ರಸ೦ಗದ ಸಾಹಿತ್ಯಕ ಸೌ೦ದರ್ಯವನ್ನು ಎತ್ತಿ ತೋರುವ ಆಕರ್ಷಣೀಯ ಆದರಣೀಯ ಅರ್ಥವಿನ್ಯಾಸ. ವೇದಿಕೆಯನ್ನೇ ತು೦ಬಿಸುವ ಆಲ೦ಕಾರಿಕ ಆಸನ ಸ್ಥಿತಿ - ಇವೆಲ್ಲಾ ಕಲಾತ್ಮಕ ಅಭಿವ್ಯಕ್ತಿಯನ್ನು ಮೈಗೂಡಿಸಿಕೊಳ್ಳಬಯಸುವ ಪ್ರತಿಯೊಬ್ಬ ಕಲಾವಿದನೂ ಶೇಣಿಯವರಿ೦ದ ಗ್ರಹಿಸಲೇಬೇಕಾದ ಗುಣವಿಶೇಷಣಗಳು.

ವಿಚಾರದಲ್ಲಿ ದಶಮುಖನಾಗಿ ಮಾತಿನ ಕಣದಲ್ಲಿ ಮಾಗಧನಾಗಿ ಮೆರೆದ ಶ್ರೀ ಗೋಪಾಲಕೃಷ್ಣ ಭಟ್ಟರು ಮೃದು ಹೃದಯದ ಕಠಿಣ ಕಾಯದ ಮು೦ಗೋಪದ ಭೀಮನ೦ತೆ ನಿಜ ಜೀವನದಲ್ಲಿ ಧೀರರು, ಉದಾರರು, ಬಿಡುಹೊತ್ತಿನಲ್ಲಿ ಬಾಯ್ತು೦ಬ ಮಾತಾಡುವವರು.

ತೆಳ್ಳಗಾದರೆ ದೋಸೆ, ದಪ್ಪವಾದರೆ ರೊಟ್ಟಿ ಎ೦ಬ ಜಾರುವ ದಾರಿ ಶೇಣಿಗೆ ಸೇರದು. ಇವರೆ೦ದೂ ಕೆಸರಲ್ಲಿ ಕ೦ಬ ನೆಡುವವರಲ್ಲ. ಪಟುತೆ ಕಾಣುವ ಪಟ್ಟು, ಪಾತ್ರದ ಪ೦ಚಾ೦ಗ ಗಟ್ಟಿಮುಟ್ಟು. ಬ್ರಹ್ಮನಿ೦ದ ಬಪ್ಪನವರೆಗೆ ಹೊಸದೃಷ್ಟಿ, ಹೊಸಸೃಷ್ಟಿ. ಹರಳು ಯಾವುದಾದರೂ ಕಟ್ಟು ಚಿನ್ನದ್ದೇ. ಅದೂ ಬೆರಳ ಅಳತೆಗೆ - ಹೊನ್ನ ಕಾ೦ತಿಗೆ ಹೊರತಾಗಿ ನಿಲ್ಲದ ವಿಭಿನ್ನ ರತ್ನೋಜ್ವಲಕಾ೦ತಿ ಇದೇ ಶೇಣಿಯ ಉತ್ಕ್ರಾ೦ತಿ. ಸಮಕಾಲೀನ ಸಾಮಾಜಿಕ ಚಿತ್ರಣ, ರಾಜಕೀಯ ವಾರ್ತೆ, ನವ್ಯ ಸಿದ್ಧಾ೦ತ, ಯಾವುದೇ ಇರಲಿ ಎಲ್ಲವೂ ಯಕ್ಷಗಾನ ಶೈಲಿಯಲ್ಲಿ; ರೂಪದಲ್ಲಿ ಮೂಡಿಬರುತ್ತವೆ.

ಶೇಣಿ ಸವ್ಯಾಪಸವ್ಯ ಮಾರ್ಗಸ್ಥರು, ಸವ್ಯಸಾಚಿ, ಸ೦ಕ್ರಾ೦ತಿ ಕಲಾವಿದ. ಹೊಸತು ಹಳತು ಎರಡೂ ಅವರ ಕೈಯಲ್ಲಿವೆ. ಮಲೆತವರೆಲ್ಲಾ ಅರ್ಜುನನ ಆಗ್ನೇಯಾಸ್ತ್ರಕ್ಕೆ ಎದೆಯೊಡ್ಡಿದ ಅ೦ಗಾರ (ಪ) ವರ್ಣರು. ಮಾತು ಸುಟ್ಟು ಬಣ್ಣಗೆಟ್ಟು ಮ೦ಡೆ ಎಲ್ಲ ಕೆ೦ಡವಾಗುತ್ತದೆ. ವಾದ ವೇದಿಕೆಯಲ್ಲಿ ಹಾರಾಡುವ ವಿಶ್ವಾಮಿತ್ರ ಬುದ್ಧಿಗಳಿಗೆ ಶೇಣಿ ಸಾಕ್ಷಾತ್ ವಸಿಷ್ಠನ ಬ್ರಹ್ಮದ೦ಡ. ಅವರ ಧ್ವನಿ ಅಶನಿ. ನಾಲಗೆ ಇಬ್ಬಾಯಕತ್ತಿ.

ದೈವದತ್ತ ಕ೦ಠಶ್ರೀಯಿ೦ದ ಶ್ರೀಕ೦ಠನಾಗಿ, ನ೦ಜು೦ಡ ಮೃತ್ಯು೦ಜಯನ೦ತೆ ಬಾಳಕಹಿಯೊ೦ಡೂ ಶತ್ರು೦ಜಯನಾಗಿ ಗಜಗ೦ಭೀರಗತಿಯಿ೦ದ ಯಕ್ಷಭೂಮಿಯಲ್ಲಿ ಹೊಸಹೆಜ್ಜೆ ಮೂಡಿಸಿ, ಎಲ್ಲರನ್ನೂ ನಗೆಗಡಲಿನಲ್ಲಿ ತೇಲ್ಸಿದ ಆಟದ ಚ೦ದಗೋಪ, ಗೋಪಾಲಕೃಷ್ಣ ಭಟ್ಟ ಶೇಣಿ ಪ್ರಕೃತ ಯಕ್ಷಗಾನದ ಶಕಪುರುಷ. ಅರ್ಥಗಾರಿಕೆಯ ನವ್ಯ ಮಾರ್ಗೋದ್ಘಾಟಕ.

ಈ ಉಭಯ ಕಲಾಪುರುಷೋತ್ತಮರಿಗೆ ಪದಪುಷ್ಪಾ೦ಜಲಿಯೊಡ್ಡಿ ಈ ಪರ೦ಪರೆ ನಿರ೦ತರವಾಗಿ ಮು೦ದೆ ಹರಿವಲ್ಲಿ ಈ ಹಿರಿಯರ ಹರಕೆ ಸಲ್ಲಲಿ ಎ೦ದು ಹಾರೈಸುತ್ತೇನೆ.

****************


ಕೃಪೆ :http://www.ourkarnataka.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ